ಕೊಪರ್ನಿಕಸ್ ಸಿದ್ಧಾಂತ

ಸೂರ್ಯ ಮತ್ತು ಗ್ರಹಗಳ ಸಾಪೇಕ್ಷಸ್ಥಾನ. ಚಲನೆ ಮುಂತಾದವನ್ನು ಕುರಿತು ನಿಲೊಲಾಸ್ ಕೊಪರ್ನಿಕಸ್ (1473-1543) ಮಂಡಿಸಿದ ಸಿದ್ಧಾಂತ. ಇದನ್ನು ಸೂರ್ಯಕೇಂದ್ರಸಿದ್ಧಾಂತವೆಂದು ಸಹ ಕರೆಯುವುದುಂಟು. ಅದುವರೆಗೆ ಪ್ರಚಲಿತವಿದ್ದ ಟಾಲೆಮಿ ಸಿದ್ಧಾಂತವನ್ನು (ಇದಕ್ಕೆ ಭೂಮಿಕೇಂದ್ರಸಿದ್ಧಾಂತ ಎಂದು ಸಹ ಹೆಸರುಂಟು) ಕೊಪರ್ನಿಕಸ್ ಸಿದ್ಧಾಂತ ಪ್ರತಿ ಸ್ಥಾಪಿಸಿದ್ದರಿಂದ ಖಗೋಳಜ್ಞಾನದ ಇತಿಹಾಸದಲ್ಲಿ ಇದಕ್ಕೆ ಪ್ರಮುಖ ಸ್ಥಾನ ಇದೆ.

	ಟಾಲೆಮಿ (ಗ್ರೀಕ್ ವಿಜ್ಞಾನಿ. ಕ್ರಿ.ಶ.127-151ರ ಅವಧಿಯಲ್ಲಿ ಬಾಳಿದ್ದನೆಂದು ನಂಬಿಕೆ.) ಎಂಬಾತನ ಹೆಸರಿನಲ್ಲಿರುವ ಭೂಮಿಕೇಂದ್ರ ಸಿದ್ಧಾಂತದ ಪ್ರಕಾರ ಜಗತ್ತಿನ ಕೇಂದ್ರ ಭೂಮಿ; ಅದು ನಿಶ್ಚಲವಾಗಿದೆ.; ಅದರ ಸುತ್ತಲೂ ಸೂರ್ಯನನ್ನು ಒಳಗೊಂಡಂತೆ ಎಲ್ಲ ಆಕಾಶಕಾಯಗಳೂ ಸುತ್ತುತ್ತಿವೆ. ಇದು ಮೇಲುನೋಟಕ್ಕೆ ಇಂದಿಗೂ ಭಾಸವಾಗುವಂಥ ವಿದ್ಯಮಾನದ ಕ್ರಮಬದ್ಧ ನಿರೂಪಣೆಯಷ್ಟೆ. ಆದರೆ ಗ್ರಹಗಳ ವಕ್ರನಡೆಯನ್ನು ವಿವರಿಸುವಲ್ಲಿ ಈ ಸರಳ ವಿವರಣೆ ಕುಂಟಿತು.  ಅದಕ್ಕಾಗಿ ಟಾಲಿಮಿ ಸಿದ್ಧಾಂತದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಅದನ್ನು ಪರಿಷ್ಕರಿಸಲಾಯಿತು. ಆಕಾಶಕಾಯಗಳ ಚಲನೆಯನ್ನು ಕುರಿತ ಯಾವುದೇ ಸಿದ್ಧಾಂತವೂ ಆ ವಿದ್ಯಮಾನವನ್ನು ಸಮರ್ಪಕವಾಗಿ ವಿವರಿಸಬೇಕು ಮಾತ್ರವಲ್ಲ. ಅದೇ ಸಿದ್ಧಾಂತದ ಅನ್ವಯದಿಂದ ಕಾಯಗಳ ಭವಿಷ್ಯಸ್ಥಾನಗಳನ್ನು ಮುನ್ನುಡಿಯಲು ಸಹ ಸಮರ್ಥವಾಗಬೇಕು. ಶತಮಾನಗಳು ಉರುಳಿದಂತೆ, ಆಕಾಶಕಾಯಗಳನ್ನು ಕುರಿತ ಸಂಗೃಹೀತ ಅಂಶಗಳು ಅಗಾಧವಾಗಿ ಬೆಳೆದಂತೆ, ಟಾಲೆಮಿ ಸಿದ್ಧಾಂತ ಆಕಾಶಕಾಯಗಳ ಭವಿಷ್ಯವನ್ನು ಮುನ್ನುಡಿಯುವುದರಲ್ಲಿ ಬಹಳವಾಗಿ ತಪ್ಪಿ ಬೀಳುತ್ತಿತ್ತು. ಅಲ್ಲದೇ ಗಣನೆಗಳಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸುವುದು ಬಲುತೊಡಕಿನ ಕೆಲಸವಾಗುತ್ತಿತ್ತು. 15-16ನೆಯ ಶತಮಾನಗಳ ಸಂಧಿಕಾಲದಲ್ಲಿ ಖಗೋಳವಿಜ್ಞಾನ ಒಂದು ಪರ್ವಬಿಂದುವನ್ನು ಮುಟ್ಟಿತೆನ್ನಬಹುದು. ಆಗ ಕೊಪರ್ನಿಕಸ್ ಸಿದ್ಧಾಂತ ಗಣನೆಗಳನ್ನು ಬಲುಮಟ್ಟಿಗೆ ಸುಲಭಗೊಳಿಸಿತು. 

	ಕೊಪರ್ನಿಕಸ್ ಸಿದ್ಧಾಂತದ ಪ್ರಕಾರ ಸೂರ್ಯ ಸ್ಥಿರವಾಗಿದೆ. ಸೂರ್ಯಕೇಂದ್ರವಾಗಿರುವಂತೆ ಅದರ ಸುತ್ತಲೂ ಬೇರೆ ಬೇರೆ ಕಕ್ಷೆಗಳಲ್ಲಿ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಎಂಬ ಗ್ರಹಗಳು ಇದೇ ಕ್ರಮದಲ್ಲಿ ಪರಿಭ್ರಮಿಸ್ತುವೆ: ಚಂದ್ರ ಭೂಮಿಯ ಸುತ್ತಲೂ ಪರಿಭ್ರಮಿಸುತ್ತಿರುವುದರಿಂದ ಭೂಮಿ-ಚಂದ್ರ ವ್ಯವಸ್ಥೆ ಒಟ್ಟಾಗಿ ಸೂರ್ಯನನ್ನು ಪರಿಭ್ರಮಿಸುತ್ತಿದೆ; ಇನ್ನು ಅನಂತ ದೂರದಲ್ಲಿ ಸ್ಥಿರನಕ್ಷತ್ರಗಳನ್ನು ಒಳಗೊಂಡಿರುವ ಆಕಾಶದ ದೈನಂದಿನ ಆವರ್ತನೆ ಹಾಗೂ ವಾರ್ಷಿಕ ಬದಲಾವಣೆ ಭೂಮಿಯ ಚಲನೆಯ ಪರಿಣಾಮವಾಗಿ ಭಾಸವಾಗುವ ವಿದ್ಯಮಾನಗಳು.

	ಕೊಪರ್ನಿಕಸ್ ಸಿದ್ಧಾಂತ ಅಂದು ತಿಳಿಸಿದ್ದ ದತ್ತಾಂಶಗಳನ್ನು ಪೂರ್ಣವಾಗಿ ಸಮನ್ವಯಗೊಳಿಸಿ, ಆಕಾಶದ ವಿದ್ಯಮಾನಗಳಿಗೆ ಒಂದು ಸರಳ ಸಂಗತ ಅರ್ಥನೀಡಿತೆಂದೇನೂ ಭಾವಿಸಬೇಕಾಗಿಲ್ಲ. ಟಾಲೆಮಿ ವಿಧಾನದಲ್ಲಿ ತಲೆದೋರುತ್ತಿದ್ದ ಅಸಂಖ್ಯಾತ ವಿರೋಧಾಭಾಸಗಳನ್ನು ಅದು ಸಮರ್ಥವಾಗಿ ಎದುರಿಸಿ ಸರಳ ಪರಿಹಾರಗಳನ್ನು ನೀಡಿತು. ನಿಜ, ಆದರೆ ಹೀಗೆ ಮಾಡುವಾಗ ಅಧಿಚಕ್ರಗಳ(ನೋಡಿ) ತೊಡಕಿನ ಪರಿಕಲ್ಪನೆಯನ್ನು ಉಳಿಸಿಕೊಳ್ಳಬೇಕಾದದ್ದು ಅನಿವಾರ್ಯವೆನ್ನಿಸಿತು. ವಾಸ್ತವಿಕವಾಗಿ ಸೂರ್ಯನ ಸ್ಥಾನ ವೃತ್ತಕೇಂದ್ರವಲ್ಲ, ಗ್ರಹಗಳ ಕಕ್ಷೆಗಳು ವೃತ್ತಪರಿಧಿಗಳಲ್ಲ. ಈ ಮುಖ್ಯಾಂಶಗಳು ಅಂದು ತಿಳಿದಿರಲಿಲ್ಲ. ಆದ್ದರಿಂದ ಕೊಪರ್ನಿಕಸ್ ಸಿದ್ಧಾಂತ ಟಾಲೆಮಿ ಸಿದ್ಧಾಂತಕ್ಕಿಂತ ಅದೆಷ್ಟೇ ಸತ್ಯಸಮೀಪವಾಗಿದ್ದರೂ ಪ್ರಾಯೋಗಿಕವಾಗಿ ಸಂಪೂರ್ಣ ಪರಿಷ್ಕøತವಾದದ್ದು ಎನಿಸಲಿಲ್ಲ.

	ಐತಿಹಾಸಿಕವಾಗಿ ಕೊಪರ್ನಿಕಸ್ ಸಿದ್ಧಾಂತಕ್ಕೆ ಅಧಿಕ ಮಹತ್ವವಿದೆ. ಯುಗಯುಗಾಂತರಗಳಿಂದ ವಿಜ್ಞಾನಿಗಳೂ ಧಾರ್ಮಿಕ ಮುಖಂಡರೂ ನಂಬಿ ಬಳಸಿಕೊಂಡು ಬಂದಿದ್ದ ಭೂಮಿಕೇಂದ್ರವಾದವನ್ನು ಪದಚ್ಯುತಿಮಾಡುವಲ್ಲಿ ಇದು ಯಶಸ್ವಿಯಾದದ್ದು ಖಗೋಳವಿಜ್ಞಾನದ ಮುನ್ನಡೆಯಲ್ಲಿ ಒಂದು ಪರ್ವಬಿಂದು. ವಿಕೃತರೂಪಗೊಂಡಿದ್ದ ಖಗೋಳವಿಜ್ಞಾನಕ್ಕೆ ಈ ಸ್ಪಷ್ಟ ರೂಪ ದೊರೆತೊಡನೆಯೇ ಕೊಪರ್ನಿಕಸ್ ಸಿದ್ಧಾಂತದಲ್ಲಿ ತಲೆದೋರುತ್ತಿದ್ದ ವಿರೋಧಾಭಾಸಗಳ ಪರಿಹಾರವನ್ನು ಅರಸುವ ಸರಿಯಾದ ದಿಶೆಯಲ್ಲಿ ಮುಂದಿನ ವಿಜ್ಞಾನಿಗಳ ಲಕ್ಷ್ಯ ಹರಿಯಿತು. ಇಂಥ ಪ್ರಯತ್ನಗಳ ಸಾಫಲ್ಯ ಸಿದ್ಧಿಸಿದ್ದು ಯೋಹಾನ್ ಕೆಪ್ಲರ್ (1571-1630) ಎಂಬ ಖಗೋಳ ವಿಜ್ಞಾನಿಯ ಉದಯದಲ್ಲಿ. ಆದ್ದರಿಂದ ಖಗೋಳವಿಜ್ಞಾನವನ್ನು ಭೌತವಿಜ್ಞಾನದ ಭವ್ಯ ಪಾಯದ ಮೇಲೆ ನೆಲೆಗೊಳಿಸುವ ದಿಶೆಯಲ್ಲಿ ಕೊಪರ್ನಿಕಸ್ ಸಿದ್ಧಾಂತದ ಕೊಡುಗೆ ಮಹತ್ತರವಾದದ್ದು. 	
								 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ